ಪುಟ್ಟಣ್ಣಚೆಟ್ಟಿ, ಕೆ ಪಿ
1856 - 1938. ಮೈಸೂರು ಸಂಸ್ಥಾನದ ಉನ್ನತ ಅಧಿಕಾರ ಸ್ಥಾನಗಳಲ್ಲಿದ್ದು ದೇಶಸೇವೆ, ಭಾಷಾಸೇವೆ ದಾನಶೀಲತೆಗಳಿಗೆ ಹೆಸರಾದವರು. ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಕೃಷ್ಣರಾಜಪುರದಲ್ಲಿ. 1875ರಲ್ಲಿ ಮೈಸೂರು ಸರ್ಕಾರದ ಸೇವೆಗೆ ಸೇರಿ 1886ರಲ್ಲಿ ಅಸಿಸ್ಟೆಂಟ್ ಕಮೀಷನರಾಗಿ 1898 ಡೆಪ್ಯುಟಿ ಕಮೀಷನರಾಗಿ ಸೇವೆ ಸಲ್ಲಿಸಿದರು. 1911ರಲ್ಲಿ ಮೈಸೂರಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು ಇವರಿಗೆ 'ರಾಜಸಭಾಭೂಷಣ' ಎಂಬ ಪ್ರಶಸ್ತಿ ನೀಡಿ ಗೌರವಿಸಿದರು. ಭಾರತ ಸರ್ಕಾರವು ಇವರಿಗೆ ' ದಿವಾನ್ ಬಹದ್ದೂರ್ ' ಪದವಿ ನೀಡಿ ಸನ್ಮಾನಿಸಿತು. 1911ರಲ್ಲೇ ಇವರು ಸಂಸ್ಥಾನದಲ್ಲಿ ದಿವಾನರಿಗೆ ಸಲಹೆ ಮಾಡಲು ಇರುತ್ತಿದ್ದ ಎಕ್ಸಿಕ್ಯೂಟಿವ್ ಕೌನ್ಸಿಲ್‍ನ ಸದಸ್ಯರಾಗಿ ತಮ್ಮ ಅಮೂಲ್ಯವಾದ ಸಲಹೆಗಳಿಂದಾಗಿ ಖ್ಯಾತಿ ಪಡೆದರು. 1912ರಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತರಾಗಿ ಮೈಸೂರಿನ ಬ್ಯಾಂಕಿನ ಅಧ್ಯಕ್ಷರಾದರು. 1913 ರಿಂದ 1920 ರವರೆಗೆ ಬೆಂಗಳೂರಿನ ಪೌರ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಇದೇ ಸಮಯದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿದ್ದರು (1915-1922). ಅನಂತರ 1927ರಲ್ಲಿ ನಡೆದ ನಾಲ್ವಡಿ ಕೃಷ್ಣರಾಜ ಒಡೆಯರ ರಜತೋತ್ಸವ ಸಮಿತಿಗೂ 1936ರಲ್ಲಿ ನಡೆದ ವಿಜಯನಗರ ಸಾಮ್ರಾಜ್ಯ ಸ್ಮಾರಕೋತ್ಸವಕ್ಕೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. 1905 ಮತ್ತು 1927ರಲ್ಲಿ ನಡೆದ ವೀರಶೈವ ಮಹಾಸಭೆಯ ಅಧ್ಯಕ್ಷರೂ ಆಗಿ ಕೆಲಸ ಮಾಡಿದರು. 1914ರಲ್ಲಿ 'ಕೈಸರ್ ಎ ಹಿಂದ್ ' ಪದಕವೂ 1917ರಲ್ಲಿ ಸಿ.ಐ.ಇ. ಸನ್ಮಾನವೂ 1925 ರಲ್ಲಿ ಸರ್ ಪ್ರಶಸ್ತಿಯೂ ಲಭಿಸಿದವು. 1936ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಎಲ್.ಎಲ್.ಡಿ. ಗೌರವ ಪದವಿಯನ್ನು ನೀಡಿತು. ಉಪನ್ಯಾಸಗಳನ್ನು ಏರ್ಪಡಿಸಿ ಪುಸ್ತಕಗಳನ್ನು ಪ್ರಕಟಿಸುವ ಸಲುವಾಗಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಇವರು ಇಪ್ಪತ್ತು ಸಾವಿರ ರೂಪಾಯಿಯ ಶಾಶ್ವತ ನಿಧಿ ಕಲ್ಪಿಸಿದ್ದಾರೆ. ಇವರು ಆಗಿನ ಕಾಲಕ್ಕೆ ಲೋಕಸೇವೆಗಾಗಿ ಮಾಡಿದ ದಾನದ ಮೊತ್ತ ನಾಲ್ಕು ಲಕ್ಷ ರೂಪಾಯಿಗಳಿಗೂ ಮೀರುತ್ತದೆ. ಕನ್ನಡ ಭಾಷೆ ಸಂಸ್ಕøತಿಗಳ ಏಳಿಗೆಗಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ ಹಾಗೂ ಸಂವರ್ಧನೆಗಳಿಗಾಗಿ ಅಪಾರ ಸಹಾಯ ಮಾಡಿದ್ದಾರೆ. 1921 ನೆಯ ಮೇ ತಿಂಗಳಿನಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಏಳನೆಯ ಸಾಹಿತ್ಯ ಸಮ್ಮೇಳನಕ್ಕೆ ಇವರನ್ನು ಅಧ್ಯಕ್ಷರನ್ನಾಗಿ ಮಾಡಿ ಪರಿಷತ್ತು ಗೌರವಿಸಿತು.

	ಇವರ ನೆನಪಿಗಾಗಿ ಬೆಂಗಳೂರಿನಲ್ಲಿ ಸರ್ ಪುಟ್ಟಣ್ಣಚೆಟ್ಟಿ ಪುರಭವನ ಹಾಗೂ ರಸ್ತೆ ಇವೆ.				(ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ